
ಲೈವ್ ಸುದ್ದಿ.ಕಾಂ/ಶಿವಮೊಗ್ಗ
ಟೀಮ್ ಇಂಡಿಯಾಕ್ಕೆ ಪ್ರತಿಭಾನ್ವಿತ ಆಟಗಾರರನ್ನು ಕೊಡುಗೆಕೊಟ್ಟ ಹಿರಿಮೆ ನಮ್ಮ ಕನ್ನಡ ಮಣ್ಣಿನದ್ದು. ಎರಪಳ್ಳಿ ಪ್ರಸನ್ನ, ಗುಂಡಪ್ಪ ವಿಶ್ವನಾಥ್, ರೋಜರ್ ಬಿನ್ನಿ, ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ರಾಹುಲ್ ದ್ರಾವಿಡ್, ಕೆಎಲ್ ರಾಹುಲ್, ಮನೀಷ್ ಪಾಂಡೆ, ಕರುಣ್ ನಾಯರ್ ಹೀಗೆ ಹೆಸರಿಸುತ್ತಾ ಹೋದರೆ ಈ ಪಟ್ಟಿ ಹನುಮಂತನ ಬಾಲದ ರೀತೀಲಿ ಬೆಳೆಯುತ್ತಲೇ ಹೋಗುತ್ತದೆ.
ಅದರಲ್ಲೂ ಕುಂಬ್ಳೆ, ದ್ರಾವಿಡ್, ಶ್ರೀನಾಥ್ ಇಂಥ ಅನೇಕರು ಕನ್ನಡಿಗರು ಭಾರತ ಕ್ರಿಕೆಟ್ ತಂಡದಲ್ಲಿ ಮಿನುಗಿ ಕನ್ನಡ ನಾಡಿಗೆ ಹೆಮ್ಮೆ ತಂದವರಿದ್ದಾರೆ. ಭಾರತದ ಕ್ರಿಕೆಟ್ ದಿಗ್ಗಜ, `ಗ್ರೇಟ್ ವಾಲ್` ರಾಹುಲ್ ದ್ರಾವಿಡ್ ತೀರಾ ಇತ್ತೀಚೆಗೆ ಹೆಚ್ಚು ನೆನಪಾದರು. ದ್ರಾವಿಡ್ರನ್ನು ನೆನಪಿಸಿದ್ದು ಯುವ ಬ್ಯಾಟ್ಸ್ಮನ್ ಕೆಎಲ್ ರಾಹುಲ್.
ಭಾರತ ಕ್ರಿಕೆಟ್ ತಂಡದಲ್ಲಿ ಈ ಹಿಂದೆ, ಯಾವ ಜವಾಬ್ದಾರಿ ಕೊಟ್ಟರೂ ರಾಹುಲ್ ದ್ರಾವಿಡ್ ಅದಕ್ಕೆ ಹೆಗಲುಕೊಡುತ್ತಿದ್ದರು. ತಂಡದ ಪರ ಕೊಸರಾಡುತ್ತಿದ್ದರು. ಈಗ ಟೀಮ್ ಇಂಡಿಯಾದಲ್ಲಿರುವ ಕನ್ನಡಿಗ ಕೆಎಲ್ ರಾಹುಲ್ ಕೂಡ ದ್ರಾವಿಡ್ ಹಾದಿಯಲ್ಲೇ ಇದ್ದಂತಿದೆ. ರಾಹುಲ್ ಈಚಿನ ಆಟ ದ್ರಾವಿಡ್ರನ್ನೇ ನೆನಪಿಸುವಂತಿದೆ.
ರಾಜ್ಕೋಟ್ನಲ್ಲಿ ನಡೆದಿದ್ದ ಭಾರತ-ಆಸ್ಟ್ರೇಲಿಯಾ ದ್ವಿತೀಯ ಏಕದಿನ ಪಂದ್ಯದಲ್ಲಿ ಕೆಎಲ್ ರಾಹುಲ್ 5ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದರು. ಅಷ್ಟೇ ಅಲ್ಲ 52 ಎಸೆತಗಳಿಗೆ 80 ರನ್ ಕೊಡುಗೆಯೂ ನೀಡಿದರು. ರಾಹುಲ್ ಅವರ ಬ್ಯಾಟಿಂಗ್ ಕ್ರಮಾಂಕವನ್ನು ಅಗತ್ಯಕ್ಕೆ ತಕ್ಕಂತೆ ಬದಲಾವಣೆ ಮಾಡಲಾಗುತ್ತಲೇಯಿದೆ. ಆದರೆ ಎಲ್ಲಾ ಕ್ರಮಾಂಕಕ್ಕೂ ರಾಹುಲ್ ಹೊಂದಿಕ್ಕೊಳ್ಳುತ್ತಿದ್ದಾರೆ, ಪ್ರೌಢ ಆಟ ಪ್ರದರ್ಶಿಸುತ್ತಿದ್ದಾರೆ. ರಾಜ್ಕೋಟ್ನಲ್ಲಿ ರಿಷಬ್ ಪಂತ್ ಅನುಪಸ್ಥಿತಿಯಲ್ಲಿ ವಿಕೆಟ್ ಕೀಪಿಂಗ್ ಜವಾಬ್ದಾರಿ ಕೊಟ್ಟರೆ ಅದನ್ನೂ ರಾಹುಲ್ ಯಶಸ್ವಿಯಾಗಿ ನಿಭಾಯಿಸಿದರು.