ನಾಳೆಯಿಂದ ಶಿವಮೊಗ್ಗದಲ್ಲಿ ಕರ್ನಾಟಕ ಮತ್ತು ರೈಲ್ವೆ ನಡುವೆ ರಣಜಿ ಪಂದ್ಯ ಆರಂಭ

ನಾಳೆಯಿಂದ ಶಿವಮೊಗ್ಗದಲ್ಲಿ ಕರ್ನಾಟಕ ಮತ್ತು ರೈಲ್ವೆ ನಡುವೆ ರಣಜಿ ಪಂದ್ಯ ಆರಂಭ

ಲೈವ್ ಸುದ್ದಿ.ಕಾಂ/ಶಿವಮೊಗ್ಗ

ಇನ್ನೇನು ಬೆಳಗ್ಗಾದರೆ ಮಲೆನಾಡ ಕ್ರಿಕೆಟ್ ಪ್ರಿಯರಿಗೆ ನಾಲ್ಕುದಿನಗಳ ಕ್ರಿಕೆಟ್ ನ ರಸದೌತಣ ಆರಂಭವಾಗಲಿದೆ.  ಈಗಾಗಲೇ, 6 ರಣಜಿ ಪಂದ್ಯಗಳಿಗೆ ಆತಿಥ್ಯ ವಹಿಸಿರುವ ಶಿವಮೊಗ್ಗಕ್ಕೆ ಈಗ ಮತ್ತೊಮ್ಮೆ ಅವಕಾಶ ಬಂದೊದಗಿದೆ.  ನಾಳೆಯ ಕರ್ನಾಟಕ ಹಾಗೂ ರೈಲ್ವೆ ನಡುವಣ ರಣಜಿ ಪಂದ್ಯಕ್ಕಾಗಿ ಶಿವಮೊಗ್ಗದ ಕೆ.ಎಸ್.ಸಿ.ಎ. ಕ್ರೀಡಾಂಗಣ ಸಜ್ಜಾಗಿದ್ದು, ಉಭಯ ತಂಡಗಳ ಆಟಗಾರರು ಮೈದಾನದಲ್ಲಿ ಇಂದು ಪೂರ್ವಭಾವಿ ತಯಾರಿಯಾಗಿ ತಾಲೀಮು ನಡೆಸಿದರು.

ಡಿ.22 ರಿಂದ 25 ರವರೆಗೆ ರಣಜಿ ಪಂದ್ಯ ನಡೆಯಲಿದೆ.ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ವರ್ಷ ಕರ್ನಾಟಕ ಹಾಗೂ ಆಂದ್ರಪ್ರದೇಶ ತಂಡಗಳ ನಡುವೆ ರಣಜಿ ಪಂದ್ಯಾವಳಿ ನಡೆದಿತ್ತು, ಮತ್ತೆ ಈ ಬಾರಿ ರಣಜಿ ಟ್ರೋಫಿ 2018 ರ ಕರ್ನಾಟಕ ಹಾಗೂ ರೈಲ್ವೇಸ್ ತಂಡಗಳ ನಡುವಿನ ಲೀಗ್ ಪಂದ್ಯಾವಳಿ ನಡೆಯುತ್ತಿದೆ. 

ನಾಳೆ ನಡೆಯುವ ರಣಜಿಯಲ್ಲಿ ಅಂತರ್ ರಾಷ್ಟ್ರೀಯ ಹಾಗೂ ಐಪಿಎಲ್ ಖ್ಯಾತಿಯ ಆಟಗಾರರು ಆಡಲಿರುವುದರಿಂದ ನಾಳೆ ನಡೆಯುವ ಮ್ಯಾಚ್ ಬಹಳ ಕುತೂಹಲಕಾರಿಯಾಗಲಿದೆ ಎಂದು ಹೇಳಬಹುದು. 

ತಾಲೀಮು ನಡೆಸಿದ ಬಳಿಕ ಕರ್ನಾಟಕ ತಂಡದ ನಾಯಕ  ವಿನಯ್ ಕುಮಾರ್ ಮಾಧ್ಯಮಗಳೊಂದಿಗೆ ಮಾತನಾಡಿ, ಈ ಪಂದ್ಯ ನಮ್ಮ ತಂಡಕ್ಕೆ ಮಹತ್ವದ್ದಾಗಿದೆ. ನಾವು ಈ ಪಂದ್ಯವನ್ನ ಗೆದ್ದು ಪಾಯಿಂಟ್ಸ್ ಪಟ್ಟಿಯಲ್ಲಿ ಮೇಲಿನ ಸ್ಥಾನ ಪಡೆಯಬೇಕು, ಕಳೆದ ಬಾರಿ ಈ ಪಿಚ್ ನಲ್ಲಿ ಜಯಗಳಿಸಿದ್ದವು, ಈ ಬಾರಿಯೂ ಕೂಡ ಜಯಗಳಿಸುವ ವಿಶ್ವಾಸವಿದೆ. ರೈಲ್ವೇಸ್ ತಂಡದಲ್ಲಿ ಉತ್ತಮ ಆಟಗಾರರು ಇದ್ದಾರೆ. ನಾವು ಅವರ ತಂಡವನ್ನು ಹಗುರವಾಗಿ ಪರಿಗಣಿಸಿಲ್ಲ.  ನಮ್ಮ ತಂಡಕ್ಕೆ ಮನೀಶ್ ಪಾಂಡೆ ಹಾಗೂ ಅಭಿಮನ್ಯು ಮಿಥುನ್ ಕಮ್ ಬ್ಯಾಕ್ ಆಗಿರುವುದು ತಂಡದ ಬಲ ಹೆಚ್ಚಿಸಿದೆ ಎಂದು ಹೇಳಿದ್ದಾರೆ.

ಇನ್ನು ಕರ್ನಾಟಕ ತಂಡದಲ್ಲಿ ವಿನಯ್ ಕುಮಾರ್, ಮನೀಶ್ ಪಾಂಡೆ, ಮಿಥುನ್, ಶ್ರೇಯಸ್ ಗೋಪಾಲ್, ಕೆ, ಗೌತಮ್ , ಎಸ್ ಅರವಿಂದ್ ರಂತಹ ಘಟಾನುಘಟಿ ಆಟಗಾರರಿದ್ರೆ, ರೈಲ್ವೇಸ್ ತಂಡದಲ್ಲಿ ಮಹೇಶ್ ರಾವತ್, ಅನುರೀತ್ ಸಿಂಗ್ ಆಡುತ್ತಿದ್ದಾರೆ.  ಕಳೆದ ಬಾರಿ ಹೈದಾರಬಾದ್ ತಂಡದ ಎದುರು ಕರ್ನಾಟಕ 59 ರನ್ ಗಳ ಅಂತರದಲ್ಲಿ ಗೆಲುವನ್ನ ದಾಖಲಿಸಿತ್ತು. ಈ ಬಾರಿ ಮತ್ತೊಮ್ಮೆ ಪಂದ್ಯ ನಡೆಯುತ್ತಿರುವ ಕಾರಣ ಶಿವಮೊಗ್ಗ ಜಿಲ್ಲೆ ಅಷ್ಟೆ ಅಲ್ಲ ಅಕ್ಕಪಕ್ಕದ ಜಿಲ್ಲೆಗಳಿಂದಲೂ ಕೂಡ ಕ್ರಿಕೆಟ್ ಪ್ರೀಯರು ಆಗಮಿಸುವ ನಿರೀಕ್ಷೆಯಿದೆ.. ಇನ್ನು ಪಂದ್ಯ ವೀಕ್ಷಣೆ ಉಚಿತವಾಗಿದೆ.

734