ವಿಶ್ವಸಂಸ್ಥೆ: ಪಾಕಿಸ್ತಾನ `ವಿಶೇಷ ಭಯೋತ್ಪಾದನಾ ವಲಯ` ಎಂದು ಜರಿದ ಭಾರತ

ವಿಶ್ವಸಂಸ್ಥೆ ಮಾನವ ಹಕ್ಕುಗಳ ಆಯೋಗದ ವೇದಿಕೆಯನ್ನು ದುರ್ಬಳಕೆ ಮಾಡಿಕೊಳ್ಳುವುದು ಪಾಕ್`ಗೆ ಅಭ್ಯಾಸವಾಗಿ ಹೋಗಿದೆ: ಭಾರತ
ಲೈವ್ ಸುದ್ದಿ | ಶಿವಮೊಗ್ಗ
 
ನವದೆಹಲಿ; ಜಮ್ಮು ಮತ್ತು ಕಾಶ್ಮೀರ ವಿಚಾರದಲ್ಲಿ ಪದೇ ಪದೇ ಅನಾವಶ್ಯಕವಾಗಿ ಮೂಗು ತೂರಿಸುತ್ತಿರುವ ಪಾಕಿಸ್ತಾನದ ವಿರುದ್ಧ ಭಾರತ ತೀವ್ರವಾಗಿ ವಾಗ್ದಾಳಿ ನಡೆಸಿದ್ದು, ಪಾಕಿಸ್ತಾನ ವಿಶೇಷ ಭಯೋತ್ಪಾದನಾ ವಲಯ ಎಂದು ಶುಕ್ರವಾರ ಹೇಳಿದೆ. 
 
ಜಮ್ಮು ಮತ್ತು ಕಾಶ್ಮೀರ ವಿಚಾರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಈ ಹಿಂದೆ ಪಾಕಿಸ್ತಾನ ವಿಶ್ವಸಂಸ್ಥೆ ಮಾನವ ಹಕ್ಕುಗಳ ಆಯೋಗಕ್ಕೆ ಭಾರತದ ವಿರುದ್ಧ ಪತ್ರ ಬರೆದಿತ್ತು. 
 
ಪಾಕಿಸ್ತಾನದ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ನೀಡಿರುವ ವಿಶ್ವಸಂಸ್ಥೆ ಮಾನವ ಹಕ್ಕುಗಳ ಆಯೋಗದ ಭಾರತದ ಎರಡನೇ ಖಾಯಂ ಕಾರ್ಯದರ್ಶಿ ಮಿನಿ ದೇವಿ ಕುಮಾಮ್ ಅವರು ಪಾಕಿಸ್ತಾನದ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ. 
 
ಜಮ್ಮು ಮತ್ತು ಕಾಶ್ಮೀರ ಗಡಿ ನಸುಳಲು ಯತ್ನ ನಿಲ್ಲಿಸುವಂತೆ ಪಾಕಿಸ್ತಾನಕ್ಕೆ ಸೂಚಿಸುವಂತೆ ಆಗ್ರಹಿಸುತ್ತೇವೆ. ಪಾಕಿಸ್ತಾನ ವಿಶೇಷ ಭಯೋತ್ಪಾದನಾ ವಲಯವಾಗಿದ್ದು, ಭಯೋತ್ಪಾದಕರಿಗೆ ಸುರಕ್ಷಿತ ತಾಣಗಳನ್ನು ರಚಿಸುತ್ತಿದೆ. ಉಗ್ರರಿಗೆ ಆರ್ಥಿಕ ನೆರವನ್ನೂ ನೀಡುತ್ತಿದೆ. 
 
ಜಮ್ಮು ಮತ್ತು ಕಾಶ್ಮೀರದಲ್ಲಿ ನಿಜವಾಗಿಯೂ ಇರುವ ಸಮಸ್ಯೆಯೆಂದರೆ ಅದು ಭಯೋತ್ಪಾದನೆ. ಭಯೋತ್ಪಾದನೆಯನ್ನು ತನ್ನ ನಿಯಂತ್ರಣದಲ್ಲಿಕೊಂಡಿರುವ ಪಾಕಿಸ್ತಾನ ಪದೇ ಪದೇ ಜಮ್ಮು ಮತ್ತು ಕಾಶ್ಮೀರದಲ್ಲಿ ದಾಳಿ ನಡೆಸುತ್ತಿದೆ. ವಿಶ್ವಸಂಸ್ಥೆ ಮಾನವ ಹಕ್ಕುಗಳ ಆಯೋಗದ ವೇದಿಕೆಯನ್ನು ದುರ್ಬಳಕೆ ಮಾಡಿಕೊಳ್ಳುವುದು ಪಾಕಿಸ್ತಾನಕ್ಕೆ ಅಭ್ಯಾಸವಾಗಿ ಹೋಗಿದೆ. ಜಮ್ಮು ಮತ್ತು ಕಾಶ್ಮೀರ ವಿಚಾರದಲ್ಲಿ ಅನಾವಶ್ಯಕವಾಗಿ ಮೂಗು ತೂರಿಸುತ್ತಿದೆ. 
 
ಬಲೂಚಿಸ್ತಾನ, ಸಿಂಧ್, ಖೈಬರ್, ಪಖ್ತುನ್ಖ್ವಾ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಜನರ ಮಾನವ ಹಕ್ಕುಗಳನ್ನು ವ್ಯವಸ್ಥಿತವಾಗಿ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಸಿಂಧ್ ಹಾಗೂ ಬಲೂಚಿಸ್ತಾನದಲ್ಲಿ ಪದೇ ಪದೇ ಮಾನವ ಹಕ್ಕುಗಳನ್ನು ಉಲ್ಲಂಘನೆ ಮಾಡುತ್ತಿದೆ. 
 
ಕಾಶ್ಮೀರದಲ್ಲಿ ಉಗ್ರರನ್ನು ಪ್ರೋತ್ಸಾಹಿಸಿ, ಭಯೋತ್ಪಾದನೆಯನ್ನೇ ತನ್ನ ಸರ್ಕಾರದ ನೀತಿಯನ್ನಾಗಿ ಪಾಕಿಸ್ತಾನ ಮಾಡಿಕೊಂಡಿದೆ. ಭಯೋತ್ಪಾದನೆಯನ್ನು ಸರ್ಕಾರದ ನೀತಿ ಮಾಡಿಕೊಂಡಿರುವ ಪಾಕಿಸ್ತಾನ, ಜಮ್ಮು ಮತ್ತು ಕಾಶ್ಮೀರದ ವಿಚಾರದಲ್ಲಿ ಭಾರತದ ವಿರುದ್ಧ ಆರೋಪ ಮಾಡಿ ತನ್ನ ತಪ್ಪುಗಳನ್ನು ಮುಚ್ಚಿಕೊಳ್ಳಲು ಯತ್ನಿಸುತ್ತಿದೆ. 
873