ಕುಣಜಿಬೈಲ್ ಗ್ರಾಮಸ್ಥರ ಬಹುದಿನದ ಬೇಡಿಕೆ ಈಡೇರಿಕೆ ಸನ್ನೀಹಿತ: ಶಾಸಕ ಕುಮಾರ್ ಬಂಗಾರಪ್ಪ

ಕುಣಜಿಬೈಲ್ ಗ್ರಾಮಸ್ಥರ ಬಹುದಿನದ ಬೇಡಿಕೆ ಈಡೇರಿಕೆ ಸನ್ನೀಹಿತ: ಶಾಸಕ ಕುಮಾರ್ ಬಂಗಾರಪ್ಪ

ಲೈವ್ ಸುದ್ದಿ.ಕಾಂ/ಸೊರಬ

ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಕುಣಜಿಬೈಲು ಗ್ರಾಮದ ನಿವಾಸಿಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ರಸ್ತೆ ಸಂಪರ್ಕ ಅಭಿವೃದ್ಧಿ ಕಾಮಗಾರಿಗೆ ಶೀಘ್ರದಲ್ಲಿಯೇ ಚಾಲನೆ ದೊರೆಯಲಿದೆ ಎಂದು ಶಾಸಕ ಕುಮಾರ್ ಬಂಗಾರಪ್ಪ ಹೇಳಿದರು.

ಪಟ್ಟಣಕ್ಕೆ ಹೊಂದಿಕೊಂಡಿರುವ ಕುಣಜಿಬೈಲು ಗ್ರಾಮದ ರಸ್ತೆ ನಿರ್ಮಾಣ ಕುರಿತು ಅಧಿಕಾರಿಗಳೊಂದಿಗೆ ಶನಿವಾರ ಸ್ಥಳ ಪರಿಶೀಲನೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲವು ವರ್ಷಗಳಿಂದ ರಸ್ತೆ ಸಂಪರ್ಕವಿಲ್ಲದೇ ಇಲ್ಲಿನ ಜನತೆ ಸಾಕಷ್ಟು ಸಮಸ್ಯೆಯನ್ನು ಎದುರಿಸುತ್ತಿದ್ದರು. ೬ನೇ ವಾರ್ಡ್‌ಗೆ ಒಳಪಡುವ  ಪ್ರದೇಶದಲ್ಲಿ ಕ್ಲಿಷ್ಟಕರ ರಸ್ತೆಯಲ್ಲಿಯೇ ಜನತೆ ಸಂಚರಿಸುವುದು ಕಷ್ಟಕರವಾಗಿತ್ತು. ಈ ನಿಟ್ಟಿನಲ್ಲಿ ಮಳೆಹಾನಿ ದುರಸ್ತಿ ಅನುದಾನದ ಸುಮಾರು ೯೦ ಲಕ್ಷ ರೂ., ವೆಚ್ಚದಲ್ಲಿ ರಸ್ತೆ ಕಾಮಗಾರಿ ಕೈಗೊಳ್ಳಲಾಗಿದೆ ಎಂದರು.

ಕೊಡಕಣಿ, ಹೆಗ್ಗೋಡು ಗ್ರಾಮದಿಂದ ಕುಣಜಿಬೈಲು ಮಾರ್ಗವಾಗಿ ಸೊರಬ-ಉಳವಿ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವುದರಿಂದ ಸರ್ಕಾರಿ ಆಸ್ಪತ್ರೆ, ಕೋರ್ಟ್, ಸಂತೆ ಮೈದಾನ ಸೇರಿದಂತೆ ವಿವಿಧ ಇಲಾಖೆಗಳಿಗೆ ದಿನ ನಿತ್ಯ ಕೆಲಸ ಕಾರ್ಯಗಳಿಗೆ ಆಗಮಿಸುವ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಜೊತೆಯಲ್ಲಿ ಕುಣಜಿಬೈಲು ಗ್ರಾಮಸ್ಥರ ಬಹುದಿನದ ಬೇಡಿಕೆಯು ಈಡೇರಿದಂತಾಗುತ್ತದೆ ಎಂದ ಅವರು, ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪಪಂ, ಅರಣ್ಯ ಇಲಾಖೆ, ಕಂದಾಯ ಅಧಿಕಾರಿಗಳು ಚರ್ಚಿಸಿ ದಾಖಲೆಗಳನ್ನು ಸಿದ್ದಪಡಿಸಿಕೊಳ್ಳುವಂತೆ ಸೂಚಿಸಿದರು.

ಭವಿಷ್ಯದ ದೃಷ್ಟಿಯಿಂದ ಸಮರ್ಪಕ ಕುಡಿಯುವ ನೀರನ್ನು ಪೂರೈಸಲು ಯೋಜನೆ ಸಿದ್ದಪಡಿಸಲಾಗಿದ್ದು, ಇದರಿಂದ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಸ್ಥರಿಗೆ ಅನುಕೂಲವಾಗಲಿದೆ. ಈಗಾಗಲೇ ಸರ್ವೇ ಕಾರ್ಯಪೂರ್ಣಗೊಂಡಿದೆ. ಯೋಜನೆಯನ್ನು ಅನುಷ್ಠಾನಗೊಳಿಸಲು ಅನುದಾನ ಬಿಡುಗಡೆಗೆ ಸರ್ಕಾರಕ್ಕೂ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುದಾನ ಬಿಡುಗಡೆಯಾಗುತ್ತಿದ್ದಂತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದರು.

ಕೆಎಫ್‌ಡಿಸಿಎಲ್ ಆರ್‌ಎಫ್‌ಒ ಎಂ.ಎಸ್. ಪ್ರದೀಪ್, ಕೆಆರ್‌ಐಡಿಎಲ್ ಸಹಾಯಕ ಇಂಜಿನಿಯರ್ ಪಿ.ಸಿ. ಪ್ರಮೋದ್, ಪಪಂ ಮುಖ್ಯಾಧಿಕಾರಿ ಜಗದೀಶ್ ನಾಯ್ಕ್, ಕಿರಿಯ ಇಂಜಿನಿಯರ್ ಶೆಲ್ಜಾ, ಪಪಂ ಸದಸ್ಯ ಎಂ.ಡಿ. ಉಮೇಶ್, ಪ್ರಮುಖರಾದ ಭೋಗೇಶ್ ಶಿಗ್ಗಾದ್, ಕೃಷ್ಣಮೂರ್ತಿ ಕೊಡಕಣಿ, ಹೂವಪ್ಪ ಕೊಡಕಣಿ, ದೇವೇಂದ್ರಪ್ಪ ಮಾವಲಿ, ಗುತ್ತಿಗೆದಾರರಾದ ಚೇತನ್, ಹನುಮಂತಪ್ಪ ಸೇರಿದಂತೆ ಸ್ಥಳೀಯ ಮುಖಂಡರು, ಗ್ರಾಮಸ್ಥರು ಇದ್ದರು

581