ಕ್ರೀಡಾ ವಸತಿ ಶಾಲೆಗೆ ಸಚಿವರ ಭೇಟಿ

ಕಂಬಳ ಓಟಗಾರ ಶ್ರೀನಿವಾಸ ಗೌಡ ತರಬೇತಿಗೆ ನೆರವು: ಸಚಿವ ಸಿ.ಟಿ.ರವಿ

 ಲೈವ್ ಸುದ್ದಿ.ಕಾಂ|ಶಿವಮೊಗ್ಗ

ಶಿವಮೊಗ್ಗ, ಫೆಬ್ರವರಿ 16 (ಕರ್ನಾಟಕ ವಾರ್ತೆ) : ಕಂಬಳ ಓಟದಲ್ಲಿ ದಾಖಲೆ ನಿರ್ಮಿಸಿರುವ ಮಂಗಳೂರಿನ ಶ್ರೀನಿವಾಸ ಗೌಡ ಅವರ ಸಾಮಥ್ರ್ಯವನ್ನು ರಾಜ್ಯ ಅಥ್ಲೆಟಿಕ್ ಅಸೋಸಿಯೇಶನ್ ಮೂಲಕ ಪ್ರಾಯೋಗಿಕವಾಗಿ ಪರಿಶೀಲಿಸಿದ ಬಳಿಕ ಅಗತ್ಯ ತರಬೇತಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಸಿ.ಟಿ.ರವಿ ಅವರು ತಿಳಿಸಿದರು.

ಅವರು ಭಾನುವಾರ ನೆಹರು ಕ್ರೀಡಾಂಗಣದಲ್ಲಿರುವ ಕ್ರೀಡಾ ವಸತಿ ಶಾಲೆಗೆ ಭೇಟಿ ನೀಡಿ ಮೂಲಸೌಲಭ್ಯಗಳ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಶ್ರೀನಿವಾಸ ಗೌಡರ ದಾಖಲೆ ಓಟದ ಬಗ್ಗೆ ಮಾಧ್ಯಮಗಳಲ್ಲಿ ಈಗಾಗಲೇ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ತರಬೇತಿಗೆ ಆಯ್ಕೆಗೆ ಪೂರ್ವಭಾವಿಯಾಗಿ ಪರೀಕ್ಷೆ ನಡೆಸುವಂತೆ ಸೂಚಿಸಲಾಗಿದೆ. ಕೇಂದ್ರ ಕ್ರೀಡಾ ಸಚಿವರು ಕೂಡಾ ಈ ಕುರಿತಾಗಿ ಹೇಳಿಕೆ ನೀಡಿದ್ದಾರೆ. ಪೂರ್ವಭಾವಿ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ಉನ್ನತ ತರಬೇತಿಗೆ ಎಲ್ಲಾ ನೆರವು ಒದಗಿಸಲಾಗುವುದು. ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡುವುದು ಕೇಂದ್ರ ಸರ್ಕಾರದ ಆಶಯ ಸಹ ಆಗಿದ್ದು, ರಾಜ್ಯ ಸರ್ಕಾರ ಕ್ರೀಡಾ ತರಬೇತಿಗೆ ಹೆಚ್ಚಿನ ಆದ್ಯತೆ ನೀಡಲಿದೆ ಎಂದು ಸಚಿವರು ಹೇಳಿದರು.

ಮುಂದಿನ ದಿನಗಳಲ್ಲಿ ದಿಢೀರ್ ಭೇಟಿ: ಕ್ರೀಡಾ ವಸತಿ ಶಾಲೆಗಳ ಸ್ಥಿತಿಗತಿ ಅರಿಯಲು ಮುಂದಿನ ದಿನಗಳಲ್ಲಿ ದಿಢೀರ್ ಭೇಟಿ ನೀಡಲಾಗುವುದು. ಸರ್ಕಾರದ ಮಾರ್ಗಸೂಚಿ ಪ್ರಕಾರ ಕ್ರೀಡಾ ಶಾಲೆಯ ವಿದ್ಯಾರ್ಥಿಗಳಿಗೆ ಊಟ ಉಪಾಹಾರ, ಕ್ರೀಡಾ ಸಾಮಾಗ್ರಿಗಳನ್ನು ಒದಗಿಸಲು ಸೂಚನೆ ನೀಡಲಾಗಿದೆ. ಊಟದ ಮೆನು ನೊಟೀಸ್ ಬೋರ್ಡ್‍ನಲ್ಲಿ ಪ್ರದರ್ಶಿಸಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಇದಕ್ಕೂ ಮೊದಲು ಸಚಿವರ ವಿದ್ಯಾರ್ಥಿಗಳೊಂದಿಗೆ ಕ್ರೀಡಾ ವಸತಿ ಶಾಲೆಯ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಸಿಕ್ಕಿರುವ ಅವಕಾಶವನ್ನು ಗರಿಷ್ಟ ಮಟ್ಟದಲ್ಲಿ ಬಳಸಿಕೊಂಡು ಕ್ರೀಡಾ ಕ್ಷೇತ್ರದಲ್ಲಿ ಉನ್ನತ ಸ್ಥಾನಕ್ಕೆ ಏರಲು ಶ್ರಮಿಸುವಂತೆ ಸಚಿವರು ಮಕ್ಕಳಿಗೆ ತಿಳಿಸಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ ಅವರು ಉಪಸ್ಥಿತರಿದ್ದರು.

303