ಸೊರಬದ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಅಚ್ಚರಿ ಘಟನೆ!

ಸೊರಬದ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಅಚ್ಚರಿ ಘಟನೆ!

ಲೈವ್ ಸುದ್ದಿ.ಕಾಂ/ಸೊರಬ

ಪಟ್ಟಣದ ಪುರದೇವ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಶನಿವಾರ ಸಂಜೆ ಅಚ್ಚರಿಯ ಘಟನೆಯೊಂದು ಜರುಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.

ಶ್ರೀ ರಂಗನಾಥ ದೇವಸ್ಥಾನದ ಗೋಪುರದ ಕಳಸವಿದ್ದ ಸ್ಥಳದ ತುದಿಗೆ ವಾನರ ಏರಿ ಕುಳಿತಿದ್ದ ದೃಶ್ಯವನ್ನು ಪತ್ರಕರ್ತ ಸೈಯದ್ ಅನ್ಸರ್ ತಮ್ಮ ಕ್ಯಾಮೆರಾ ಕಣ್ಣಲ್ಲಿ ಸೆರೆಹಿಡಿದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ವಾನರ ದೇವಸ್ಥಾನದ ಗೋಪುರದ ಕಳಸ ಏರಿ ಕುಳಿತಿದ್ದು ಬಹು ಚರ್ಚಿತ ವಿಷಯವಾಗಿದೆ.

ಶಿಥಿಲಗೊಳ್ಳುತ್ತಿರುವ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಕಾರ್ಯಗಳು ಜರುಗುತ್ತಿಲ್ಲ. ಪಟ್ಟಣದ ಮುಖ್ಯರಸ್ತೆ ಅಗಲೀಕರಣ ಕಾಮಗಾರಿ ಅರ್ಧಕ್ಕೆ ನಿಂತು ದಶಕಗಳೇ ಕಳೆದಿದೆ. ಇನ್ನು ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದ ನೇರವಾಗಿ ಸುಮಾರು 500 ಮೀಟರ್ ಅಂತರದಲ್ಲಿ ಶ್ರೀ ವರದಹಸ್ತ ಆಂಜನೇಯ ಸ್ವಾಮಿ ದೇವಸ್ಥಾನವೂ ಇದೆ. ರಸ್ತೆ ಅಗಲೀಕರಣ ಪ್ರಕ್ರಿಯೆ ಆರಂಭವಾಗುವ ಮುನ್ನ ಆಂಜನೇಯ ದೇವಸ್ಥಾನವನ್ನು ಸ್ಥಳಾಂತರ ಮಾಡಬೇಕು ಎನ್ನುವ ಚರ್ಚೆಗಳು ಅಧಿಕಾರಿ ವಲಯದಲ್ಲಿ ನಡೆಯುತ್ತಿರುವ ಬೆನ್ನಲ್ಲೇ, ಅಚ್ಚರಿ ಎಂಬಂತೆ ಸಾಕ್ಷಾತ್ ಹನುಮ ಸ್ವರೂಪಿ ವಾನರ ದೇವಸ್ಥಾನದ ಕಳಸವೇರಿದೆ.

ಇನ್ನು, ದೇವಸ್ಥಾನ ಐದು ಕಳಸಗಳ ಪೈಕಿ ಒಂದು ಕಳಸ ಧರೆಗೆ ಉರುಳಿ ಹತ್ತಾರು ವರ್ಷವೇ ಆಗಿದೆ. ಇತ್ತ ಮುಜುರಾಯಿ ಇಲಾಖೆಯ ವ್ಯಾಪ್ತಿಗೊಳಪಡುವ ದೇವಸ್ಥಾನದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ದೇವಸ್ಥಾನ ಮತ್ತು ಗೋಪುರ ಸೋರುತ್ತಿದ್ದರೂ, ಯಾರೊಬ್ಬರೂ ಇತ್ತ ಕಡೆ ಗಮನ ಹರಿಸಿಲ್ಲ. ದೇವಸ್ಥಾನಗಳ ಸುತ್ತ ಪೊದೆಗಳು ಬೆಳೆದಿದೆ. ದೇವಸ್ಥಾನಕ್ಕೆ ಹೊಂದಿಕೊಂಡಂತೆ ಕಲ್ಯಾಣ ಮಂದಿರದ ಕಾಮಗಾರಿಯೂ ಮಂದಗತಿಯಲ್ಲಿ ಸಾಗುತ್ತಿದೆ. ಸುರಭಿಪುರ ವಾಸ ಶ್ರೀ ರಂಗನಾಥ ಸ್ವಾಮಿಗೆ ಪುರಾಣ ಮತ್ತು ಐತಿಹಾಸಿಕವಾಗಿಯೂ ಸಾಕಷ್ಟು ದಾಖಲೆಗಳಿವೆ. ಊರ ಕಾಯುವವ ಹನುಮ ಎಂಬುದು ಸಹ ಜನತೆಯ ನಂಬಿಕೆ. ಆಂಜನೇಯ ದೇವಸ್ಥಾನದ ಸ್ಥಳಾಂತರ ವಿಷಯ ಚರ್ಚೆಯಾಗುತ್ತಿರುವ ಹೊತ್ತಿನಲ್ಲಿಯೇ ಇಂತಹದ್ದೊಂದು ಘಟನೆ ನಡೆದಿರುವುದು ಜನತೆಯಲ್ಲಿ ಆತಂಕ ಒಂದಡೆಯಾದರೆ, ಮತ್ತೊಂದಡೆ ದೇವಸ್ಥಾನ ಸ್ಥಳಾಂತರಕ್ಕೆ ಕೆಲ ಭಕ್ತರಿಂದ ವಿರೋಧವೂ ಸಹ ವ್ಯಕ್ತವಾಗುತ್ತಿದೆ. ಕೆಲವರು ಇದೊಂದು ಸಾಮಾನ್ಯ ಸಂಗತಿ ಸಹ ಎನ್ನುತ್ತಿದ್ದಾರೆ.

 

838